ಕ್ಯಾನೀತ್ಸಾರೊ ಕ್ರಿಯೆ

 	
ಇಟಾಲಿಯನ್ ರಸಾಯನ ವಿಜ್ಞಾನಿ ಕ್ಯಾನೀತ್ಸಾರೊ ಕಂಡುಹಿಡಿದ ಒಂದು ಕಾರ್ಬನಿಕ ರಾಸಾಯನಿಕ ಕ್ರಿಯೆ. ಯಾವುದೇ ಆಲ್ಡಿಹೈಡಿನ ಅಣುವಿನಲ್ಲಿ ಕಾರ್ಬನ್ ಪರಮಾಣುವಿಗೆ (ಆಲ್ಡಿಹೈಡ್ ಗುಂಪಿನ ಪಕ್ಕದ ಪರಮಾಣುವಿಗೆ) ಹೈಡ್ರೊಜನ್ ಪರಮಾಣು ಬಂಧಿತವಾಗಿಲ್ಲದಿದ್ದರೆ ಅಂಥ ಆಲ್ಡಿಹೈಡ್ ಸಾರ ಕ್ಷಾರದ ಸಾನ್ನಿಧ್ಯದಲ್ಲಿ ಈ ಕ್ರಿಯೆಗೆ ಒಳಗಾಗುತ್ತದೆ. ಅದರ ಪರಿಣಾಮವಾಗಿ ಆಲ್ಡಿಹೈಡ್ ಅಣುಗಳಲ್ಲಿ ಅರ್ಧ ಭಾಗ ಉತ್ಕರ್ಷಣ ಹೊಂದಿ ಕಾರ್ಬಾಕ್ಸಿಲಾಮ್ಲವಾಗುತ್ತದೆ. ಉಳಿದ ಅರ್ಧ ಭಾಗ ಅಪಕರ್ಷಣ ಹೊಂದಿ ಆಲ್ಕೊಹಾಲಾಗುತ್ತದೆ.
		
	ಅಸಿಟಿಕ್‍ಆಮ್ಲ ಬ್ಯಾಕ್ಟೀರಿಯ ಮತ್ತು ಅನೇಕ ಸಜೀವ ಅಂಗಾಂಶಗಳು ಈ ಕ್ರಿಯೆಯನ್ನು ಪ್ರಚೋದಿಸುತ್ತವೆ. ಅಲ್ಯೂಮಿನಿಯಂ ಈಥಾಕ್ಸೈಡು ಅಥವಾ ಪ್ರೋಪಾಕ್ಸೈಡು ಸಹ ಈ ಕ್ರಿಯೆಗೆ ಉತ್ತೇಜನ ನೀಡುತ್ತದೆ. ಇಲ್ಲಿ ಕ್ರಿಯೆ ಇನ್ನೂ ಮುಂದೆ ಹೋಗಿ ಆಲ್ಕೊಹಾಲ್ ಮತ್ತು ಆಮ್ಲಗಳ ಸಂಯೋಗದಿಂದ ಎಸ್ಟರು ಉತ್ಪತ್ತಿಯಾಗುತ್ತದೆ.     (ಬಿ.ಎಸ್‍ಯು.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ